ಕಬ್ಬಾಳ ದುರ್ಗ : ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನಲ್ಲಿರುವ ಒಂದು ಬೆಟ್ಟ. ಸಮುದ್ರಮಟ್ಟದಿಂದ 3,507' ಎತ್ತರವಿದ್ದು ಶಂಖುವಿನಾಕಾರದಲ್ಲಿದೆ. ಕಡಿದಾದ ಪಕ್ಕಗಳಿಂದ ಕೂಡಿದ ಈ ಬೆಟ್ಟದ ಮೇಲೆ ದುರ್ಭೇದ್ಯವಾದ ಕೋಟೆಯೊಂದನ್ನು ಕಟ್ಟಿರುವುದರಿಂದ ಇದಕ್ಕೆ ಈ ಹೆಸರು ಬಂದಿದೆ. ಕೋಟೆಯನ್ನು ಕಟ್ಟಿಸಿದವ ಗಾಥೆಕ್ ರಾಜ ಎಂಬ ಹೆಸರಿನ ಪಾಳೆಯಗಾರನೆಂಬ ಪ್ರತೀತಿಯಿದೆ. ಒಂದು ಕಡೆಯಿಂದ ಮಾತ್ರ ಈ ಬೆಟ್ಟದ ಮೇಲೇರಿಹೋಗುವುದು ಸಾಧ್ಯ. ಅಲ್ಲೂ ಮೆಟ್ಟಿಲುಗಳು ಬಲು ಕಡಿದು; ಅದನ್ನು ಬಂಡೆಯಲ್ಲೇ ಕೊರೆಯಲಾಗಿದೆ. ಕೆಲವು ಕಡೆಗಳಲ್ಲಿ ಮೆಟ್ಟಿಲುಗಳು ಆರು ಅಂಗುಲಗಳಿಗೂ ಕಿರಿದಾಗಿವೆ. ಆದ್ದರಿಂದ ಇದನ್ನು ಹತ್ತುವುದು ಬಲುಕಷ್ಟ. ಸಾಕಷ್ಟು ಆಹಾರ ನೀರುಗಳನ್ನೊದಗಿಸಿಕೊಂಡು ಇಲ್ಲಿ ಉಳಿದರೆ ಶತ್ರುವಿನ ಆಕ್ರಮಣದ ಭಯವಿಲ್ಲದೆ ಇರುವುದು ಸಾಧ್ಯವಿತ್ತು. ಈ ಪ್ರದೇಶವನ್ನಾಳುತ್ತಿದ್ದ ಹಿಂದೂ ಮುಸ್ಲಿಂ ಆಡಳಿತಗಾರರೂ ಮುಮ್ಮಡಿ ಕೃಷ್ಣರಾಜ ಒಡೆಯರ ಸರ್ಕಾರದವರೂ ಅಪಾಯಕಾರಿಗಳಾದ ರಾಜದ್ರೋಹಿಗಳನ್ನು ಇಲ್ಲಿ ಇಡುತ್ತಿದ್ದರು. ಇಲ್ಲಿಯ ನೀರು ಕೂಡ ವಿಷಮಯವೆಂದು ಪರಿಗಣಿತವಾಗಿತ್ತು. ಅಹಿತಕರ ವಾತಾವರಣವೂ ಅತೃಪ್ತಿಕರ ಆಹಾರವೂ ಖೈದಿಯ ಬಂಧನದ ನೋವಿನ ಅವಧಿಯನ್ನು ಮೊಟಕುಮಾಡಿ ಬೇಗ ಅವನನ್ನು ಪರಲೋಕಕ್ಕೆ ಅಟ್ಟುತ್ತಿತ್ತೆಂದು ಕರ್ನಲ್ ವಿಲ್ಸ್‌್ಕ ಬರೆದಿದ್ದಾನೆ. ಮೈಸೂರನ್ನಾಳುತ್ತಿದ್ದ (1731-34) ಏಳನೆಯ ಚಾಮರಾಜ ಒಡೆಯರನ್ನೂ ಅವರ ಪತ್ನಿಯನ್ನೂ ದಳವಾಯಿ ದೇವರಾಜ ಸೆರೆಯಲ್ಲಿಟ್ಟಿದ್ದದ್ದು ಈ ದುರ್ಗದಲ್ಲೇ. ಅವರು ಇಲ್ಲಿ ಬಹುಕಾಲ ಬದುಕಲಿಲ್ಲ. ಹೈದರ್ಆಲಿ ಇಲ್ಲಿಯ ಕೋಟೆಯನ್ನು ದುರಸ್ತುಗೊಳಿಸಿ ಇದಕ್ಕೆ ಜಾಫರಾಬಾದ್ ಎಂದು ಹೆಸರಿಟ್ಟ. ಆದರೆ ಇಂದು ಯಾರೂ ಇದನ್ನು ಆ ಹೆಸರಿನಿಂದ ಕರೆಯುವುದಿಲ್ಲ. 1864ರಲ್ಲಿ ಇಲ್ಲಿಯ ಫಿರಂಗಿಗಳನ್ನೂ ಮದ್ದನ್ನೂ ನಾಶಗೊಳಿಸಲಾಯಿತಲ್ಲದೆ ಇಲ್ಲಿದ್ದ ಸಿಬ್ಬಂದಿಯನ್ನು ಸ್ಥಳಾಂತರಗೊಳಿಸಲಾಯಿತು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ